     ಮೂಲದೊಡನೆ ಪರಿಶೀಲಿಸಿ

ಕಪ್ಪು ವಸ್ತು : ಒಂದು ವಸ್ತುವಿನ ಮೇಲೆ ಪಾತವಾಗುವ ಉಷ್ಣದ ಅಥವಾ ಬೆಳಕಿನ ವಿಸರಣೆಯನ್ನು ಅದು ಪುರ್ಣವಾಗಿ ಹೀರಿಕೊಂಡರೆ (ಅವಶೋಷಣೆ-ಅಬ್ಸಾರ್ಪ್ಷನ್) ಅದಕ್ಕೆ ಕಪ್ಪುವಸ್ತು (ಬ್ಲಾಕ್ ಬಾಡಿ) ಎಂದು ಹೆಸರು. ಇಂಥ ಒಂದು ವಸ್ತು ಇದ್ದರೆ ಅದರ ಮೇಲೆ ಪಾತವಾಗುವ ಎಲ್ಲ ವಿಸರಣೆಯನ್ನೂ ಅದು ಹೀರಿಕೊಂಡು ಒಂದಿಷ್ಟನ್ನೂ ಪ್ರತಿಫಲಿಸದು, ಎಂದರೆ, ಈ ವಸ್ತುವಿನ ಪ್ರತಿಫಲನಗುಣ ಶೂನ್ಯ ಮತ್ತು ಅವಶೋಷಣಗುಣ ಶೇ. 100 ಪಾತವಾಗುವ ಎಲ್ಲ ವಿಸರಣೆಯನ್ನು ಪ್ರತಿಫಲಿಸುವ-ಎಂದರೆ ಪ್ರತಿಫಲನಗುಣ ಶೇ. 100 ಮತ್ತು ಅವಶೋಷಣ ಗುಣ ಶೂನ್ಯವಿರುವ-ವಸ್ತುವಿನ ಹೆಸರು ಬಿಳಿವಸ್ತು. ದಟ್ಟ ಮಸಿಲೇಪಿತವಸ್ತು ಈ ಮಾನಕದಲ್ಲಿ ಕಪ್ಪುವಸ್ತುವಲ್ಲ-ಕಾರಣ, ಅದರ ಅವಶೋಷಣಗುಣ ಶೇ. 100 ಆಗಿರುವುದಿಲ್ಲ. 

ಪ್ರಾಯೋಗಿಕವಾಗಿ ಸನ್ನಿಹಿತ ಕಪ್ಪು ವಸ್ತುವನ್ನು ಪಡೆಯುವ ವಿಧಾನ ಹೀಗಿದೆ: ಒಂದು ದಪ್ಪವಾದ ಅಪಾರದರ್ಶಕ ಘನವಸ್ತುವಿನಲ್ಲಿ ಕುಹರವನ್ನು ಕೊರೆಯಬೇಕು; ಕುಹರದ ಒಳ ಮೈಯನ್ನೂ ಬಾಯನ್ನೂ ಪುರ್ಣವಾಗಿ ಮಸಿಯಿಂದ ಮೆತ್ತಬೇಕು (ಪ್ಲಾಟಿನಂಮಸಿ ಶೇ. 98 ಕಪ್ಪು ವಸ್ತು); ಈ ಕುಹರದ ಪ್ರತಿಫಲನ ಗುಣ ಕನಿಷ್ಠವೂ ಅವಶೋಷಣ ಗುಣ ಗರಿಷ್ಠವೂ ಆಗಿವೆ.

ಕಪ್ಪುವಸ್ತು ವಿಸರಣದ ಬಗ್ಗೆ ಕಿರ್ಚಾಫ್, ವೀನ್ ಮತ್ತು ಲುಮ್ಲರ್ ಮೊದಲಾದ ಭೌತವಿಜ್ಞಾನಿಗಳು ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸಿದ್ದಾರೆ. ಸಮಾನವಾಗಿ ಕಾಯಿಸಿದ ಆವರಣದೊಳಗಿನ ವಿಸರಣೆ ಪುರ್ಣವಾಗಿ ಕಪ್ಪಾಗಿರುತ್ತದೆ ಎಂದು ಕಿರ್ಚಾಫ್ ಸಾಧಿಸಿದ (1858). ಈ ತತ್ತ್ವವನ್ನೇ ಬಳಸಿಕೊಂಡು ವೀನ್, ಲುಮ್ಲರ್ ಮತ್ತು ಫೆರಿ ಪ್ರಯೋಗಯೋಗ್ಯ ಕಪ್ಪುವಸ್ತುಗಳನ್ನು ಪಡೆದರು. ಇವನ್ನು ವೀನ್ಸ್‌ ಕಪ್ಪುವಸ್ತು ಮತ್ತು ಫೆರಿ ಕಪ್ಪು ವಸ್ತು ಎಂದು ಕರೆಯಲಾಗಿದೆ. ಇವುಗಳಲ್ಲಿ ಸರಳವಾದ ಫೆರಿ ಕಪ್ಪು ವಸ್ತುವಿನ ವಿವರ ಹೀಗಿದೆ: ಚಿತ್ರದಲ್ಲಿ ತೋರಿಸಿರುವಂತೆ ಉ ಒಂದು ಟೊಳ್ಳಾಗಿರುವ ದುಂಡನೆಯ ಕೋಶ; ಇದನ್ನು ಹಿತ್ತಾಳೆ ಅಥವಾ ಪ್ಲಾಟಿನಂನಿಂದ ತಯಾರಿ ಸಿರುತ್ತಾರೆ. ಇದು ಆತುಕೊಳ್ಳಬೇಕಾಗಿರುವ ಉಷ್ಣತೆಗೆ ಅನುಗುಣವಾಗಿ ಇದರ ಒಳಭಾಗಕ್ಕೆಲ್ಲ ಮಸಿ ಬಳಿದಿದೆ. ಇದರ ಒಳಭಾಗದಲ್ಲಿ ಒಂದು ಭಾಗದಲ್ಲಿ ಶಂಕ್ವಾಕೃತಿಯ ಒಂದು ವಿಶೇಷ ರಚನೆ (P) ಇದೆ. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಕೋಶದ ಬಾಯಿ (ಔ)ಇದೆ. ರಂಧ್ರದ ಹೊರಗಿನಿಂದ ನೇರವಾಗಿ ಬೀಳುವ ವಿಸರಣೆಯನ್ನು P ಯಿಂದ ತಡೆಯುವುದು ಸಾಧ್ಯವಾಗುತ್ತದೆ. ಔ ಮೂಲಕ ಪ್ರವೇಶಿಸಿದ ಯಾವುದೇ ವಿಸರಣ ಅ ಯ ಒಳಮೈಮೇಲೆ ಬಿದ್ದು ಹಲವು ಸಲ ಪ್ರತಿಫಲನಗೊಳ್ಳುವುದು ಸಾಧ್ಯ. ಹೀಗಾದ ತರುವಾಯ ಮತ್ತೆ ಅ ಗೆ ಬರುವಲ್ಲಿ ಆ ವಿಸರಣೆ ತನ್ನ ಶಕ್ತಿಯನ್ನು ಬಹಳವಾಗಿ ಕಳೆದುಕೊಂಡಿರುತ್ತದೆ. ಆದರೆ ಅ ಯ ಒಳಮೈಯನ್ನು ಕಪ್ಪುಲೇಪನ ಮಾಡಿರುವುದರಿಂದ ಒಳಹೊಕ್ಕ ವಿಸರಣೆ ಒಂದು ಸಲ ಪ್ರತಿಫಲನಗೊಳ್ಳುವಲ್ಲಿಯೇ ಅದು ಪುರ್ಣವಾಗಿ ಕಪ್ಪುಲೇಪನದಿಂದ ಹೀರಲ್ಪಡುತ್ತದೆ.  ಹೀಗೆ ಕೋಶದ ರಂಧ್ರ ಕಪ್ಪುವಸ್ತುವಾಗಿ ವರ್ತಿಸುತ್ತದೆ. ಇದರ ಒಳಗಡೆ ಇಟ್ಟ ಒಂದು ಕನ್ನಡಿಯೂ ಕಪ್ಪುವಸ್ತುವಾಗುತ್ತದೆ.

ಕಪ್ಪುವಸ್ತುವಿನ ವಿಸರಣದ ಅಧ್ಯಯನದಿಂದಾಗಿ ಬೆಳಕಿನ ಪ್ರಭಾಣುತತ್ತ್ವಕ್ಕೂ ಶಕಲ ಬಲವಿಜ್ಞಾನಕ್ಕೂ ಹೆಚ್ಚಿನ ಪುಷ್ಟಿ ದೊರೆತಿದೆ. ಪ್ಲಾಂಕನ ನಿಯಂತಾಕ ಸ್ಥಿರಪಟ್ಟಿದೆ. 
(ಬಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ